ನ್ಯೂಮನ್, ಫ್ರಾನ್ಸಿಸ್ ವಿಲಿಯಂ
	1805-1897. ವಿದ್ವಾಂಸ ಹಾಗೂ ದೈವತಾಶಾಸ್ತ್ರದ ಲೇಖಕ. ಜೆ.ಎಚ್.ನ್ಯೂಮನ್ನನ ಸೋದರ, ಹುಟ್ಟಿದ್ದು ಲಂಡನ್ನಿನಲ್ಲಿ. ಈತನ ವಿದ್ಯಾಭ್ಯಾಸ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ಅಲ್ಲಿ ಈತ ಕ್ಲ್ಯಾಸಿಕ್ಸ್ (ಮಹಾಕಾವ್ಯ) ಮತ್ತು ಗಣಿತಶಾಸ್ತ್ರಗಳೆರಡರಲ್ಲೂ ಉಚ್ಚಮಟ್ಟದಲ್ಲಿ ತೇರ್ಗಡೆಯಾದ. ಪ್ರಾಚ್ಯ ದೇಶಗಳಲ್ಲಿ ಮೂರು ವರ್ಷ ಸಂಚರಿಸಿದ ಮೇಲೆ ಬ್ರಿಸ್ಟಾಲ್ ಕಾಲೇಜಿನಲ್ಲಿ ಕ್ಲ್ಯಾಸಿಕಲ್ ವಿಷಯದ ಟ್ಯೂಟರ್ ಆಗಿ ನೇಮಕಗೊಂಡ. ಅನಂತರ 1840ರ ಮ್ಯಾಂಚೆಸ್ಟರಿನ ನ್ಯೂ ಕಾಲೇಜಿನಲ್ಲಿ ಕ್ಲ್ಯಾಸಿಕಲ್ ಸಾಹಿತ್ಯದ ಪ್ರಾಧ್ಯಾಪಕನಾದ. ಅನಂತರ 1846-69ರ ವರೆಗೆ ಲಂಡನ್ನಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಲ್ಯಾಟಿನ್ ಭಾಷಾ ಪ್ರಾಧ್ಯಾಪಕನಾಗಿದ್ದ. ನ್ಯೂಮನ್ ಸೋದರರಿಬ್ಬರೂ ಕ್ರೈಸ್ತಮತ ಧರ್ಮದ ಬೋಧೆಯ ಪ್ರಭಾವಕ್ಕೊಳಗಾಗಿದ್ದವರು. ಆದರೂ ಅವರಿಬ್ಬರ ನಿಲವು ತೀರ ಭಿನ್ನವಾಗಿತ್ತು. ಫ್ರಾನ್ಸಿಸ್ ವಿಶಾಲಾಭಿಪ್ರಾಯದ ಮೂಲಕ ಸಂದೇಹವಾದದ ಕಡೆ ತಿರುಗಿದವ. ಈತನ ಪ್ರಸಿದ್ಧ ಕೃತಿಗಳು; ಫೇಸಸ್ ಆಫ್ ಫೇತ್(1850), ದಿ ಹಿಸ್ಟರಿ ಆಫ್ ಹೀಬ್ರೂ ಮಾನಾರ್ಕಿ(1847), ದಿ ಸೋಲ್ (1849), ಎ ಹ್ಯಾಂಡ್ ಬುಕ್ ಆಫ್ ಮಾಡರ್ನ್ ಅರ್ಯಾಬಿಕ್ (1866). ಎ ಡಿಕ್ಷನರಿ ಆಫ್ ಮಾಡರ್ನ್ ಅರ್ಯಾಬಿಕ್ (ಎರಡು ಸಂಪುಟಗಳು, 1871). ಇವಲ್ಲದೆ ಅನೇಕ ಗಣಿತ ಗ್ರಂಥಗಳನ್ನೂ ಪ್ರಕಟಿಸಿದ್ದಾನೆ. ತನ್ನ ಸೋದರ ಕಾರ್ಡಿನಲ್ ನ್ಯೂಮನ್ನನ ಆರಂಭಿಕ ಜೀವನವನ್ನು ಕುರಿತಂತೆ ಸಣ್ಣ ಗ್ರಂಥವೊಂದನ್ನು 1891ರಲ್ಲಿ ಬರೆದು ಪ್ರಕಟಿಸಿದ್ದಾನೆ. ಈತ ಜೀವನದುದ್ದಕ್ಕೂ ಸಸ್ಯಾಹಾರಿಯಾಗಿದ್ದು ಮಾದಕ ಪದಾರ್ಥಗಳಿಂದ ದೂರವಿದ್ದು, ಸಂಪೂರ್ಣ ಧಾರ್ಮಿಕ ಜೀವನ ನಡೆಸಿದವ.						    (ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ